ಮೊಹೆಂಜೊದಾರೊ
 	ಕ್ರಿ. ಪೂ. 3ನೆಯ ಸಹಸ್ರಮಾನಕ್ಕೆ ಸೇರಿದ ಹಾಗೂ ವೇದಪೂರ್ವಯುಗದ ಸಿಂಧೂ ನಾಗರಿಕತೆಗೆ ಸಂಬಂಧಿಸಿದ ಪ್ರಧಾನ ನಿವೇಶನ; ಪಾಕಿಸ್ತಾನದ ಸಿಂಧ್ ಪ್ರಾಂತ್ಯದ ಲಾರ್ಕಾನ್ ಜಿಲ್ಲೆಯಲ್ಲಿ ಡೊಕ್ರಿ ರೈಲ್ವೆನಿಲ್ದಾಣದಿಂದ ಸು. 11 ಕಿ.ಮೀ. ದೂರದಲ್ಲಿದೆ. 1912ರಲ್ಲಿ ಡಿ. ಆರ್. ಭುಡಾರ್‍ಕರ್ ಇಲ್ಲಿಯ ಕೆಲವು ಅವಶೇಷಗಳ ಛಾಯಾಚಿತ್ರ ತೆಗೆದಿದ್ದರು. ಆದರೆ ಈ ನಿವೇಶನದ ಮಹತ್ತ್ವ ಬೆಳಕಿಗೆ ಬಂದದ್ದು 1922ರಲ್ಲಿ ಆರ್.ಡಿ. ಬ್ಯಾನರ್ಜಿ ಎಂಬ ವಿದ್ವಾಂಸರಿಂದ. 1923ರಲ್ಲಿ ಇವರು ಇಲ್ಲಿಯ ಸ್ತೂಪ ಪ್ರದೇಶದಲ್ಲಿ ಅಗೆಯುತ್ತಿದ್ದಾಗ ಕೆಲವು ಕುಷಾಣ ನಾಣ್ಯಗಳೂ ಸೇರಿದಂತೆ ಅನೇಕ ವಸ್ತುಸಾಮಗ್ರಿಗಳು ದೊರೆತವು. ಸುಮಾರು ಇದೇ ಸಮಯದಲ್ಲಿ ಹರಪ್ಪ ಎಂಬಲ್ಲಿ ಭೂಶೋಧನೆಯಲ್ಲಿ ನಿರತರಾಗಿದ್ದ ಡಿ. ಆರ್. ಸಹನಿಯವರಿಗೆ ಕುಂಭಾವಶೇಷಗಳು ಚಿತ್ರಸಂಕೇತವಿರುವ ಮುದ್ರೆಗಳೂ ಲಭ್ಯವಾದವು. ಇವೆರಡೂ ನಿವೇಶಗಳಲ್ಲಿ ಉಪಲಬ್ದವಾದ ಅವಶೇಷಗಳನ್ನು ಅಧ್ಯಯನಮಾಡಿದ ಸರ್ ಜಾನ್ ಮಾರ್ಷಲ್ ಅವರು 1924ರ ಇಲಸ್ಟ್ರೇಟೆಡ್ ಲಂಡನ್ ನ್ಯೂಸ್ ಪತ್ರಿಕೆಯಲ್ಲಿ ತಮ್ಮ ಸಂಶೋಧನೆಯನ್ನು ಪ್ರಕಟಿಸಿದರು.

  	ಮೊಹೆಂಜೊದಾರೊ ಎಂದರೆ `ಸತ್ತವರ ದಿಬ್ಬ ಎಂದು ಮಾರ್ಷಲ್ ಅರ್ಥೈಸಿದ್ದರೆ, `ಸಂಗಮದ ದಿಬ್ಬ ಎನ್ನುವುದು ಎಫ್. ಡಬ್ಲ್ಯು. ಥಾಮಸ್ ನೀಡುವ ಅರ್ಥ. ಸುಮಾರು 240 ಎಕರೆ ಪ್ರದೇಶಗಳಲ್ಲಿ ಹರಡಿರುವ ನಿವೇಶನದಲ್ಲಿ ಕ್ರಮವಾಗಿ ಮಾರ್ಷಲ್ ಇ.ಜೆ.ಎಚ್. ಮ್ಯಾಕೆ.ಸರ್ ಮಾರ್ಟಿಮರ್ ವೀಲರ್ ಉತ್ಖನನ ನಡೆಸಿದ್ದಾರೆ. ಇಲ್ಲಿಯ ರಚನೆಗಳು ಹರಪ್ಪಾದವಕ್ಕಿಂತ ಸುಸ್ಥಿತಿಯಲ್ಲಿದ್ದವು. ಕಡಿಮೆ ಮಳೆ, ಏರುಪೇರಿನ ಉಷ್ಣತೆ, ಧೂಳು ಬಿರುಗಾಳಿಗಳಿಂದ ಕೂಡಿರುವ ಇಂದಿನ ಮೊಹೆಂಜೊದಾರೊ ಹಿಂದೊಮ್ಮೆ ದಟ್ಟಕಾಡುಗಳಿಂದ, ಸಮೃದ್ಧ ಮಳೆಯಿಂದ ಕೂಡಿದ ವಾಸಯೋಗ್ಯ ಪ್ರದೇಶವಾಗಿತ್ತು. ಸುಟ್ಟ ಇಟ್ಟಗೆಯ ಬಳಕೆ ಇದನ್ನು ಸಮರ್ಥಿಸುತ್ತದೆ. ಅಲ್ಲದೆ ಸಿಂಧೂ ಮುದ್ರೆಗಳ ಮೇಲೆ ಆನೆ, ಘೇಂಡಾಮೃಗ, ಹುಲಿ ಮುಂತಾದ ಪ್ರಾಣಿಗಳ ಚಿತ್ರಗಳು ಕಂಡು ಬಂದಿವೆ. ಸಾಮಾನ್ಯವಾಗಿ ಈ ಬಗೆಯ ಪ್ರಾಣಿಗಳು ವಾಸಿಸುವುದು ದಟ್ಟವಾದ ಅರಣ್ಯಪ್ರದೇಶಗಳಲ್ಲಿಯೇ. ಸಪ್ತಸಿಂಧೂ ಪ್ರದೇಶದಲ್ಲಿ ಮಳೆ ಹೆಚ್ಚೆಂದು ಋಗ್ವೇದದಲ್ಲಿ ಹೇಳಿರುವುದೂ ಗಮನಾರ್ಹ. ಸಿಂಧೂನದಿಯ (ಅಥವಾ ಅದರ ಪ್ರಮುಖ ಶಾಖೆಯ) ತೀರದಲ್ಲಿಯೇ ಹಿಂದೆ ಮೊಹೆಂಜೊದಾರೊ ನಗರವಿತ್ತು. ಈಗ ಸಿಂಧೂ ನದಿ ಮೊಹೆಂಜೊದಾರೊದಿಂದ ಸುಮಾರು 5 ಕಿಮೀ ದೂರದಲ್ಲಿ ಹರಿಯುತ್ತಿದೆ.

  	ಕಬ್ಬಿಣ ಬಿಟ್ಟು ಮತ್ತೆಲ್ಲ ಲೋಹಗಳ ಬಳಕೆ ಇದ್ದುದರಿಂದ ಸಿಂಧೂಸಂಸ್ಕøತಿಯನ್ನು ಕಾಂಸ್ಯಯುಗೀನ ಸಂಸ್ಕøತಿ ಅಥವಾ ತಾಮ್ರಶೀಲಾ ಸಂಸ್ಕøತಿ ಎಂದು ಕರೆಯಲಾಗಿದೆ. ನಗರ ನಿರ್ಮಾಣದಲ್ಲಿ ಪ್ರಧಾನವಾಗಿ ಅನುಸರಿಸಬೇಕಾದ ರೀತಿ ನೀತಿಗಳನ್ನೆಲ್ಲ ಮೊಹೆಂಜೊದಾರೊದಲ್ಲಿ ಅನುಸರಿಸಲಾಗಿತ್ತೆನ್ನುವುದು ಗಮನಾರ್ಹ. ವಿಶಾಲವಾದ ಬೀದಿಗಳು, ಆಯತಾಕಾರದ ಕಟ್ಟಡಗಳು, ಉತ್ತಮ ಒಳಚರಂಡಿ ವ್ಯವಸ್ಥೆ ಈ ನಗರದ ಪ್ರಧಾನ ಲಕ್ಷಣಗಳು. ಮೊಹೆಂಜೊದಾರೊವನ್ನು `ಬರಿದಾದ ಈಗಿನ ಲಂಕಾಪೈರ್ ನಗರದಂತೆ ಕಾಣುತ್ತದೆ ಎಂದು ಮಾರ್ಷಲ್ ವರ್ಣಿಸಿದ್ದಾರೆ.

  	ಇಲ್ಲಿಯ ಮನೆಗಳ ಮುಖ್ಯ ಲಕ್ಷಣ ಎಂದರೆ ತೆರೆದ ಅಂಗಳ ಮತ್ತು ಅದರ ಸುತ್ತ ಕೋಣೆಗಳನ್ನು ಕಟ್ಟಿರುವುದು. ಮಹಡಿಯಲ್ಲಿ ಸ್ನಾನದ, ಮಲಗುವ ಮತ್ತು ವಾಸದ ಕೋಣೆಗಳಿದ್ದರೆ ಕೆಳಗೆ ಉಗ್ರಾಣ ಹಾಗೂ ಅಡುಗೆ ಕೋಣೆಗಳಿದ್ದವು. ನೀರಿನ ವ್ಯವಸ್ಥೆ ಉತ್ತಮವಾಗಿತ್ತು. ಕಟ್ಟಡದ ಹೊರಗೋಡೆಗಳು ಸರಳವಾಗಿದ್ದು ಅಲಂಕಾರರಹಿತವಾಗಿದ್ದವು. 80 ಅಡಿ ( 27 ಅಡಿ ವಿಸ್ತೀರ್ಣದಲ್ಲಿ ನಾಲ್ಕೈದು ಕೋಣೆಗಳಿಂದ ಕೂಡಿದ ಸಣ್ಣ ಮನೆಗಳಿದ್ದವು. ದೊಡ್ಡ ಮನೆಗಳಲ್ಲಿ ಎರಡು ಪಟ್ಟು ಹೆಚ್ಚು ಕೋಣೆಗಳಿರುತ್ತಿದ್ದವು. ಮೂವತ್ತು ಕೋಣೆಗಳ ಮನೆಯೂ ಇದ್ದ ಉದಾಹರಣೆಯುಂಟು. ಪ್ರಯೋಜನದ ದೃಷ್ಟಿಯಿಂದ ಸರಳ ರಚನೆಗಳನ್ನು ನಿರ್ಮಿಸಿದ ಇಲ್ಲಿಯ ಜನರು ಆರೋಗ್ಯ ಹಾಗೂ ಶುಚಿತ್ವಕ್ಕೆ ವಿಶೇಷ ಗಮನವಿತ್ತಿದ್ದರು. ನೆಲದ ಇಳಿಜಾರು, ನೀರು ಹೋರಹೋಗಲು ವ್ಯವಸ್ಥೆ ಮುಂತಾದವು ಸ್ನಾನದ ಕೋಣೆಗಳಲ್ಲಿ ಎದ್ದು ಕಾಣುತ್ತದೆ. ಬಚ್ಚಲಿನ ನೀರು ಹೊರಹೋಗಿ ರಸ್ತೆಯ ಒಳಚರಂಡಿಗೆ ಸೇರುವಂತೆ ವ್ಯವಸ್ಥೆ ಬೆರಗುಂಟುಮಾಡುತ್ತದೆ.

  	ಸಭಾಭವನ ಹಾಗೂ ಸಾರ್ವಜನಿಕ ಸ್ನಾನದ ತೊಟ್ಟಿಗಳು ಗಮನಿಸಬೇಕಾದ ಇತರ ರಚನೆಗಳು. 1925-26ರಲ್ಲಿ ಸರ್‍ಜಾನ್ ಮಾರ್ಷಲ್ ಬೆಳಕಿಗೆ ತಂದ ಮಹಾಸ್ನಾನ ಕೊಳದ ಕೆಲವು ಭಾಗಗಳನ್ನು 1927-28ರಲ್ಲಿ ಮ್ಯಾಕೆಯವರು ಪರಿಶೋಧಿಸಿದರು. 180 ಅಡಿ ( 108 ಅಡಿ ವಿಸೀರ್ಣದ ಕಟ್ಟಡದೊಳಗಿದ್ದ ಈಜುಕೋಳದ ವಿಸ್ತೀರ್ಣ 40 ಅಡಿ ( 23 ಅಡಿ. ಒಳ ಅಂಗಳದ ಮಧ್ಯದಲ್ಲಿ ಕೊಳವಿದ್ದು ನಾಲ್ಕು ಕಡೆಗೂ ಮೊಗಸಾಲೆಗಳಿವೆ. ಸ್ನಾನತೊಟ್ಟಿಯ ಪಕ್ಕದಲ್ಲಿ ನೀರು ಜಿನುಗದಂತೆ ಮಾಡಲು ವಿಶೇಷವಾಗಿ ನಿರ್ಮಿಸಿದ ಇಟ್ಟಿಗೆಯ ಚೂರುಗಳ ಅಂಚುಗಳಿಗೆ ಬಿಟ್ಯುಮೆನ್ನಿನ ಲೇಪನವಾಗಿದ್ದು. ಕೊಳಕ್ಕೆ ನೀರನ್ನು ಒದಗಿಸುವ ಹಾಗೂ ಹೊರ ಸಾಗಿಸುವ ವ್ಯವಸ್ಥೆ ಪರಿಪೂರ್ಣವಾಗಿತ್ತು. ಈ ಬಗೆಯ ವ್ಯವಸ್ಥೆ ಇತರ ಸಮಕಾಲೀನ ನಾಗರಿಕತೆಗಳಾವುದರಲ್ಲಿಯೂ ಕಾಣದಂಶವಾಗಿದೆ. ಕೊಳದ ಕಟ್ಟಡಕ್ಕೆ ಆರು ಪ್ರವೇಶದ್ವಾರಗಳಿವೆ. 1927-28ರಲ್ಲಿ ಸ್ತೂಪಕಟ್ಟಡಕ್ಕೂ ಮಹಾಸ್ನಾನ ಕೊಳಕ್ಕು ನಡುವೆ ಸ್ನಾನಗೃಹಗಳ ಸಮೂಹವೊಂದು ಪತ್ತೆಯಾಯಿತು. ಪ್ರಾಯಶಃ ಪುರೋಹಿತವರ್ಗದವರ ಬಳಕೆಗಾಗಿ ಇವನ್ನು ನಿರ್ಮಿಸಿದ್ದಿರಬೇಕೆಂದು ಊಹಿಸಲಾಗಿದೆ.

  	ಮೊಹೆಂಜೊದಾರೊವಿನ ಬಾವಿಗಳ ಪಾಶ್ರ್ವಕ್ಕೆ ವಿಶೇಷ ಬೆಣೆಯಾಕಾರದ ಇಟ್ಟಿಗೆಗಳನ್ನು ಜೋಡಿಸಲಾಗಿದ್ದಿತು. ಸಾಮಾನ್ಯವಾಗಿ ಈ ಬಾವಿಗಳ ವ್ಯಾಸ 2 ಅಡಿ 22 ಇಂಚು ಅತಿ ಸಣ್ಣ ಬಾವಿ 1ಅಡಿ 1ಇಂಚು ವ್ಯಾಸವಾಗಿದ್ದರೆ ಅತಿದೊಡ್ಡ ಬಾವಿಯ ವ್ಯಾಸ 7 ಅಡಿ 2 ಇಂಚು.  ಹೂಳೆತ್ತಿ ಶುದ್ಧೀಕರಿಸಿದ ಮೇಲೆ ಇಲ್ಲಿಯ ಬಾವಿಗಳು ಉಪಯೋಗಕ್ಕೆ ಯೋಗ್ಯವಾದವು.

  	ಇಲ್ಲಿಯ ಉತ್ತರ-ದಕ್ಷಿಣ ರಸ್ತೆ ವಿಶಾಲವಾಗಿದ್ದು ದ್ವಿಚಕ್ರವಾಹನ ಮತ್ತು ಪಾದಚಾರಿಗಳ ಓಡಾಟಕ್ಕೆ ಅನುಕೂಲಕರವಾಗಿತ್ತು. ಹೆಚ್ಚು ಜನಸಂಚಾರವಿದ್ದುದು 33 ಅಡಿ ಅಗಲದ, ಸುಮಾರು 1 ಕಿಮೀ ಉದ್ದದ ಪೂರ್ವ ಬೀದಿಯಲ್ಲಿ. 9-13 ಅಡಿಗಳ ಅಗಲವುಳ್ಳ ಹಲವು ಬೀದಿಗಳಿದ್ದವು. ಧಾನ್ಯ ಸಂಗ್ರಹ ಕಟ್ಟಡ ಹಾಗೂ ಕಾಲುವೆಮನೆಗಳನ್ನೂ ಮೊಹೆಂಜೊದಾರೊದಲ್ಲಿ ಗುರುತಿಸಲಾಗಿದೆ.
ಗೋದಿ, ಬಾರ್ಲಿ, ಖರ್ಜೂರ, ಹತ್ತಿ ಮುಂತಾದವು ಆಗಿನ ಮುಖ್ಯ ಬೆಳೆಗಳು. ಪ್ರಾಣಿಸಾಕಾಣಿಕೆ ಇಲ್ಲಿಯ ಜನರಿಗೆ ತಿಳಿದಿತ್ತು. ಮಾಂಸಾಹಾರ ಬಳಕೆಯಲ್ಲಿತ್ತು. ನೂಲು ತೆಗೆಯುವುದು, ಬಣ್ಣ ಹಾಕುವುದು, ಕಸೂತಿ ಮುಂತಾದವು ಜನರಿಗೆ ಪರಿಚಿತವಾಗಿದ್ದವು. ಹೆಂಗಸರು ಅಲಂಕಾರಪ್ರಿಯರಾಗಿದ್ದರು. ವಿವಿಧ ವಿನ್ಯಾಸದ ವಿಪುಲ ಆಭರಣಗಳು, ಕಾಡಿಗೆ ಕಡ್ಡಿ, ರಂಗು ಮುಂತಾದವು ಇಲ್ಲಿ ಲಭ್ಯವಾಗಿವೆ. ಕೋಳಿಕಾಳಗ ಜನಪ್ರಿಯ ಕ್ರೀಡೆಯಾಗಿತ್ತು. ಗೂಳಿ-ಎಮ್ಮೆಗಳೊಡನೆ ಹೋರಾಡುವ ಸ್ಪರ್ಧೆಯೂ ಇತ್ತೆಂದು ತೋರುತ್ತದೆ. ಮಕ್ಕಳ ಆಟದ ವಸ್ತು ರಾಶಿಯಲ್ಲಿ ಪಗಡೆ ದಾಳ, ಗೋಲಿ, ಚೆಂಡು ಮುಂತಾದವು ಸಿಕ್ಕಿವೆ. ಚಟ್‍ಶಿಲೆಯಲ್ಲಿ ಸಿದ್ಧಪಡಿಸಿದ ಹಲವು ಬಗೆಯ ತೂಕದ ಕಲ್ಲುಗಳು ಬಳಕೆಯಲ್ಲಿದ್ದವು. ಇವು ಸೂಸಾ ಮತ್ತು ಇರಾಕ್‍ಗಳಲ್ಲಿ ದೊರೆತ ತೂಕದ ಕಲ್ಲುಗಳಿಗಿಂತ ಹೆಚ್ಚು ನಿಖರವಾದವೆಂದು ವಿದ್ವಾಂಸರು ಅಭಿಪ್ರಾಯಪಟ್ಟಿದ್ದಾರೆ. ಚಿಪ್ಪಿನ ಮಾನವೊಂದರ ತುಣುಕನ್ನು ಮ್ಯಾಕೆ ಇಲ್ಲಿ ಅನ್ವೇಷಿಸಿದ್ದಾರೆ.

ಗೃಹಕ್ಯತ್ಯದ ಸಾಮಗ್ರಿಗಳು, ಮೃತ್ಪಾತ್ರೆಗಳು, ತಾಮ್ರ ಹಾಗೂ ಕಂಚಿನ ಉಪಕರಣಗಳು ಹೇರಳವಾಗಿ ಇಲ್ಲಿ ಸಿಕ್ಕಿವೆ. ಇಲ್ಲಿಯ ಜನರಿಗೆ ತಾಮ್ರದ ಅದುರನ್ನು ಕರಗಿಸಿ ಎರಕ ಹೊಯ್ಯುವ ಕಲೆ ತಿಳಿದಿತ್ತು. ಭರ್ಜಿ, ಶೂಲ, ಶಿರ, ಬಾಣ, ಬಗೆಬಗೆಯ ಚಾಕುಗಳು, ಕತ್ತಿ, ಸೂಜಿ, ದಬ್ಬಳ, ಮೀನುಗಾಳ, ಗದೆ ಮುಂತಾದ ಹತ್ತು ಹಲವು ಸಮಗ್ರಿಗಳು ಇಲ್ಲಿ ಉಪಲಬ್ದವಾಗಿವೆ. ಇಲ್ಲಿ ಕಂಡುಬಂದ ಗರಗಸ ಪ್ರಂಪಚದಲ್ಲಿಯೇ ಪ್ರಾಚೀನವಾದುದೆಂದು ಸರ್ ಫ್ಲಿಂಡರ್ಸ್ ಪೆಟ್ರಿ ಸೂಚಿಸಿದ್ದಾರೆ. ಮಣ್ಣಿನ ಗಿಲಿಕೆ, ಕೋಳಿ, ಅಥವಾ ಪಾರಿವಾಳ ರೂಪದ ಪೀಪ, ಚಕ್ರ, ಪ್ರಾಣಿ ಗೊಂಬೆಗಳು, ಪಕ್ಷಿರಥ, ಪೀಠೋಪಕರಣ, ಬಂಡಿ ಮುಂತಾದ ಆಟದ ವಸ್ತುಗಳನ್ನು ಮಣ್ಣಿನಲ್ಲಿ ಕಲಾತ್ಮಕವಾಗಿ ತಯಾರಿಸಲಾಗಿದೆ.
 
 	ಮಡಕೆಕುಡಿಕೆಗಳನ್ನು ತಿಗರಿಯಿಂದ ತಯಾರಿಸಲಾಗುತ್ತಿತ್ತು. ಸುಟ್ಟರೆ ನೇರಳೆ, ನಸುಗೆಂಪು ಅಥವಾ ಬೂದುಬಣ್ಣಕ್ಕೆ ತಿರುಗುವ ಮತ್ತು ಬಂಧದಲ್ಲಿ ಬಿಗಿಯಾದ ಜೇಡುಮಣ್ಣು ಇವುಗಳ ತಯಾರಿಕೆಗೆ ಯುಕ್ತ ಸಾಮಗ್ರಿಯಾಗಿತ್ತು. ಮೃತ್ಪಾತ್ರೆಗಳ ಮೇಲೆ ಕ್ರೀಮ್, ಚಾಕಲೇಟ್ ಅಥವಾ ಕೆಂಪುವರ್ಣಗಳ ಲೇಪನವೂ ಗೋಚರಿಸುತ್ತದೆ. ಹಿಡಿಕೆಗಳಿರುವ ಮಡಕೆಗಳು ಹೆಚ್ಚು ಸಾಮಾನ್ಯವಾಗಿ ಕಂಡುಬರುತ್ತವೆ. ಪಾನಪಾತ್ರೆ ವಿಶಿಷ್ಟವಾದುದು. ಮಡಕೆ ಹಾಗೂ ಜಾಡಿಗಳ ಕಂಠಭಾಗದಲ್ಲಿ ರಂಧ್ರಗಳಿವೆ. ದಾರ ಪೋಣಿಸಿ ಮುಚ್ಚಳಹಾಕಿ ಕಟ್ಟಿಡಲೋ ಪಾತ್ರೆಗಳನ್ನು ಮೇಲಿನಿಂದ ತೂಗುಹಾಕಲೋ ಅವನ್ನು ಕೊರೆದಿರಬೇಕೆಂದು ಊಹಿಸಬಹುದು. ಮೃತ್ಪಾತ್ರೆಗಳ ಮೇಲೆ ಪರಸ್ಪರ ಕತ್ತರಿಸುವ ವೃತ್ತಾಸಾಲುಗಳ ಮತ್ತು ಗೆರೆಗಳ ವಿನ್ಯಾಸ ಅಥವಾ ಅಪರೂಪಕ್ಕೆ ಪ್ರಾಣಿಚಿತ್ರಗಳ ಅಲಂಕರಣ ಕಂಡುಬರುತ್ತದೆ. ಟೆಲ್ ಅಸ್ಮಾರ್‍ನಲ್ಲಿ ಕಂಡುಬಂದಂಥ ಟಗರಿನ ಆಕೃತಿಯ ಪಾತ್ರೆಯೊಂದು ಇಲ್ಲಿ ಲಭ್ಯವಾಗಿರುವುದು ಗಮನಾರ್ಹ.

ಜೇಡಿಮಣ್ಣಿನ ಪ್ರತಿಮೆಗಳೂ ಇಲ್ಲಿ ದೊರೆತಿವೆ. ತ್ರಿಪರ್ಣಿ ವಿನ್ಯಾಸದ ಮೇಲು ವಸ್ತ್ರ ಹೊದ್ದಿರುವ ಪುರೋಹಿತ ಅಥವಾ ಶ್ರೀಮಂತನ ಮೂರ್ತಿ ಸುಪ್ರಸಿದ್ಧವಾದುದು. ಅರ್ಧನಿಮೀಲಿತ ನೇತ್ರ, ಚಾಚಿದ ಮೂಗು, ಸಾಮಾನ್ಯ ಗಾತ್ರದ ಬಾಯಿ, ಸಣ್ಣಗಡ್ಡದ ಈ ಮೂರ್ತಿ ಸಿಂಧೂ ಜನರ ಕಲಾಪ್ರಜ್ಞೆಗೆ ಹಾಗೂ ಕೌಶಲ್ಯಕ್ಕೆ ಸಾಕ್ಷಿಯಾಗಿದೆ. ಕಲ್ಲಿನ ಪ್ರತಿಮೆಗಳು ವಿರಳ. ಪ್ರಾಣಿಚಿತ್ರದಲ್ಲಿ ಕಂಡುಬರುವ ಸಹಜ ಸೊಬಗು ಮನಸೆಳೆಯುತ್ತದೆ. ಹಲವಾರು ಮುದ್ರೆಗಳ ಮೇಲಿನ ಗೂಳಿ, ಕಾಡುಕೋಣ, ಘೇಂಡಾಮೃಗ, ಹುಲಿ, ಕರಡಿ ಮುಂತಾದವನ್ನು ಗಮನಿಸಿದರೆ ಈ ಅಂಶ ಸ್ಪಷ್ಟಪಡುತ್ತದೆ. ಸಿಂಧೂ ಮುದ್ರೆಗಳ ಮೇಲಿನ ಬರಹೆಗಳನ್ನು ಹಂಟರ್ ಲಾಂಗ್‍ಡನ್ ಹ್ರಾಂಜಿಯವರಿಂದ ಹಿಡಿದು ಈಚಿನ ಎಸ್. ಆರ್. ರಾವ್. ಶಂಕರ ಮೊಕಾಶಿ ಪುಣೇಕರ್ ಮತ್ತಿತರವರೆಗೆ ಹಲವು ವಿದ್ವಾಂಸರು ಓದಲು ಪ್ರಯತ್ನಿಸಿದ್ದಾದರೂ ಸರ್ವಸಮ್ಮತ ಅಭಿಪ್ರಾಯವಿನ್ನೂ ಮೂಡಿಲ್ಲ. ವಿದ್ವಾಂಸರ ಅಧ್ಯಯನ ಪ್ರಯತ್ನಗಳು ನಡೆಯುತ್ತಿವೆ.

ಇಲ್ಲಿಯ ಜನರ ಧಾರ್ಮಿಕ ಜೀವನದ ಬಗೆಗೆ ಕೆಲವು ಸುಳಿವುಗಳಷ್ಟೇ ದೊರೆಯುತ್ತವೆ. ಮಾತೃದೇವತೆಯ ಆರಾಧನೆ ಪ್ರಧಾನವಾಗಿತ್ತು. ಮಣ್ಣಿನ ನಗ್ನಸ್ತ್ರೀ ಮೂರ್ತಿಗಳು ಹೆಚ್ಚಿನ ಸಂಖ್ಯೆಯಲ್ಲಿ ದೊರೆತಿವೆ. ಶಿವ, ಲಿಂಗ, ವೃಷಭ, ವೃಕ್ಷಾದಿಗಳನ್ನೂ ಪೂಜಿಸಲಾಗುತ್ತಿತ್ತು. ಹುಲಿ, ಆನೆ, ಘೇಂಡಾಮೃಗ ಮುಂತಾದವೂ ಪೂಜ್ಯವಸ್ತುಗಳಾಗಿದ್ದವು.

	ಮೊಹೆಂಜೊದಾರೊ ಹಠಾತ್ತಾಗಿ ದಾಳಿಗೀಡಾಗಿ ನಾಶವಾದಂತೆ ತೋರುತ್ತದೆ. ವಿವಿಧ ಭಂಗಿಯಲ್ಲಿ ಎಲ್ಲೆಂದರಲ್ಲಿ ಬಿದ್ದಿರುವ ಜನರ ಅಸ್ಥಿಪಂಜರಗಳು ಈ ಅಭಿಪ್ರಾಯಕ್ಕೆ ಪೋಷಕವಾಗಿವೆ. ನದಿಯ ಅನೂಹ್ಯ ಪ್ರವಾಹ, ಅರಣ್ಯಗಳ ನಾಶ ಇತ್ಯಾದಿ ಸಂಗತಿಗಳೂ ಈ ಬಗೆಯ ಹಠಾತ್‍ನಾಶಕ್ಕೆ ಕಾರಣವಾಗಿರಬೇಕೆಂದು ವಿದ್ವಾಂಸರು ಊಹಿಸಿದ್ದಾರೆ. ಈ ನೆಲೆಯಲ್ಲಿ ಹಲವು ಸಮಾಧಿಗಳೂ ಗೋಚರಿಸಿದು, ಅವುಗಳಲ್ಲಿ ಮೃತನಿಗೆ ಸಂಬಂಧಿಸಿದ ವಸ್ತುಗಳನ್ನೂ ಹುಗಿದಿಟ್ಟದ್ದು ಕಂಡುಬಂದಿದೆ. ಕಳೇಬರಗಳನ್ನು ಪಶುಪಕ್ಷಿಗಳಿಗೆ ತೆರೆದಿಟ್ಟು, ಉಳಿದ ಅಸ್ಥಿಗಳನ್ನು ಆರಿಸಿ ಸಮಾಧಿಮಾಡುವ ಪದ್ಧತಿಯೂ ಆಗ ಇತ್ತು. ಇವನ್ನು ಅಸಮಗ್ರ ಹುಗಿತವೆಂದು ಪರಿಗಣಿಸಲಾಗಿದೆ. ಭಸ್ಮಪಾತ್ರೆಗಳು ಸಿಕ್ಕಿರುವುದರಿಂದ ದಹನಾನಂತರ ಹೂಳುವ ಪದ್ಧತಿಯೂ ಅಸ್ತಿತ್ವದಲ್ಲಿತ್ತೆಂದು ತಿಳಿದುಬರುತ್ತದೆ.

	ಇಲ್ಲಿಯ ಜನರು ಅನೇಕ ಬುಡಕಟ್ಟಿಗೆ ಸೇರಿದವರಾಗಿದ್ದರು. ಮೆಡಿಟರೇನಿಯನ್ ಬುಡಕಟ್ಟಿನ ಜನ ಹೆಚ್ಚು ಪ್ರಮಾಣದಲ್ಲಿದ್ದರು; ವೆಡ್ಡ, ಆಲಪೈನ್ ಬುಡಕಟ್ಟಿನ ಮಂಗೋಲಿಯನ್ ಬುಡಕಟ್ಟಿನ ಜನರಿದ್ದುದಕ್ಕೂ ಉದಾಹರಣೆಗಳು ಕಾಣಸಿಗುತ್ತವೆ. ಸಮಕಾಲೀನ ಮೆಸೊಪೊಟೇಮಿಯದ ಸುಮೆರಿಯನ್ ಸಂಸ್ಕøತಿಯ ಜನರಿಗೂ ಸಿಂಧೂ ಸಂಸ್ಕøತಿಯ ಜನರಿಗೂ ವ್ಯಾವಹಾರಿಕ ಸಂಬಂಧವಿತ್ತೆಂದು ತಿಳಿದುಬರುತ್ತದೆ. ರಫ್ತು-ಆಮದು ನಡೆಯುತ್ತಿದ್ದವು. ಸಿಂಧೂ ನಾಗರಿಕತೆಗೆ ಕಾರಣರಾದವರು ದ್ರಾವಿಡರು ಅಥವಾ ಆರ್ಯರ ಒಂದು ಶಾಖೆ ಎಂಬ ವಾದ ವಿವಾದ ನಡೆದಿದೆ. ಈಗಲೂ ಇದು ವಿವಾದಾಸ್ಪದ ಸಮಸ್ಯೆಯಾಗಿಯೇ ಉಳಿದಿದೆ.
                                (ಎಚ್.ಎಂ.ಎನ್.ಆರ್.)